ಪ್ರಾಯೋಗಿಕ ಪಾಠಶಾಲೆ

ನೂತನ ವಿಧಾನಗಳನ್ನು ಸಾರ್ವತ್ರಿಕವಾಗಿ ಬಳಕೆಗೆ ತರುವ ಮುನ್ನ ಈ ವಿಧಾನಗಳು ಎಷ್ಟರಮಟ್ಟಿಗೆ ಉಚಿತವೆನಿಸಬಲ್ಲವು ಫಲದಾಯಕವಾಗಬಲ್ಲವು ಎಂಬುದನ್ನು ದೃಢಪಡಿಸಿಕೊಳ್ಳಲು ಪರೀಕ್ಷಾರ್ಥ ಆ ವಿಧಾನವನ್ನು ಆಚರಣೆಗೆ ತರಲು ಏರ್ಪಟ್ಟಿರುವ ಪಾಠಶಾಲೆ. (ಎಕ್ಸ್‍ಪೆರಿಮೆಂಟಲ್ ಸ್ಕೂಲ್)
	ಈ ಶತಮಾನದ ಆದಿಯಿಂದ ವಿವಿಧ ರೀತಿಯ ಸೈದ್ಧಾಂತಿಕ ವಿಚಾರಗಳು ಶಿಕ್ಷಣ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬರುತ್ತಿವೆ. ಅವುಗಳ ಯಥಾರ್ಥತೆಯನ್ನು ಪರೀಕ್ಷಿಸಿ ನೋಡಲು ಎಲ್ಲ ದೇಶಗಳಲ್ಲೂ ಪ್ರಾಯೋಗಿಕ ಶಾಲೆಗಳು ಅಸ್ತಿತ್ವಕ್ಕೆ ಬಂದಿವೆ, ಬರುತ್ತಿವೆ. ಕಿಂಡರ್‍ಗಾರ್ಟನ್, ನರ್ಸರಿ ಶಾಲೆ, ಮಾಂಟಿಸೋರಿ ಶಿಕ್ಷಣ, ಉದ್ಯಮ ಶಿಕ್ಷಣ, ಮೂಲ ಶಿಕ್ಷಣ-ಮುಂತಾದ ಹೊಸ ಪದ್ಧತಿಗಳನ್ನು ಪರೀಕ್ಷಿಸಿ ನೋಡಲು ಪ್ರಾಥಮಿಕ ಕ್ಷೇತ್ರದಲ್ಲೂ ಡಾಲ್ಟನ್ ಪದ್ಧತಿ, ಎನೆಟ್ಕ, ಪದ್ಧತಿ ಹೋವರ್ಡ್‍ಪದ್ಧತಿ ಮುಂತಾದವು ಪ್ರೌಢ ಶಿಕ್ಷಣದ ಮಟ್ಟದಲ್ಲೂ ಕ್ಲಸ್ಟರ್ ಕಾಲೇಜ್, ಗುರುಕುಲ ಪದ್ಧತಿ, ವಿಶ್ವಭಾರತಿ, ಮುಂತಾದವು ಉನ್ನತ ಶಿಕ್ಷಣದ ಮಟ್ಟದಲ್ಲೂ ಪ್ರಯೋಗಾರ್ಥ ಪರೀಕ್ಷೆಗೆ ಒಳಪಟ್ಟಿವೆ. ಈ ಪ್ರಾಯೋಗಿಕ ಸಂಸ್ಥೆಗಳು ನೂತನಪದ್ಧತಿಯ ಯಶಸ್ಸನ್ನು ದೃಢಪಡಿಸಿದ ಮೇಲೆ ಅದನ್ನು ಸಾರ್ವತ್ರಿಕವಾಗಿ ಆಚರಣೆಗೆ ತರುವ ಯತ್ನ ನಡೆಯುತ್ತದೆ. ಅಧ್ಯಾಪಕರ ವೃತ್ತಿಶಿಕ್ಷಣ ಶಾಲೆಗಳಲ್ಲಿ ಅಭ್ಯರ್ಥಿಗಳಿಗೆ ಅಭ್ಯಾಸಾರ್ಥಪಾಠ ಮಾಡಲು ಬಳಸುವ ಶಾಲೆಗಳಿಗೂ ಕೆಲವು ದೇಶಗಳಲ್ಲಿ ಈ ಹೆಸರಿದೆ. ಅಲ್ಲಿ ಅಭ್ಯರ್ಥಿಗಳು ತರಗತಿಯಲ್ಲಿ ಬೋಧಿಸಿದ ವಿಧಾನಗಳನ್ನು ಪ್ರಯೋಗಿಸಿ ನೋಡುವರು.
(ಎಂ.ಎಸ್.ಐಡಿ.)